Tuesday, December 17, 2013

ಕಳೆದು ಕೊಂಡ ಪ್ರೀತಿ ಸಿಗುವುದೆಂದು ???

ಕಳೆದು ಕೊಂಡ ಪ್ರೀತಿ, ಮತ್ತೆ ಸಿಗುವುದೆಂದು….???



ಆಗ ಸುಮಾರು 3 ವರ್ಷ ಇರಬಹುದು ನನಗಿನ್ನೂ ನೆನಪಿದೆ, ಅಮ್ಮ ಬಟ್ಟೆಯನ್ನು ಒಗೆಯಲು, ಕೆರೆಗೆ ನನ್ನನ್ನು ಜೊತೆಗೆ ಕರೆದು ಕೊಂಡು ಹೋಗಿದ್ದರು ಅದಕ್ಕೂ ಒಂದು ಕಾರಣ ಇದೆ ಏಕೆಂದರೆ ನಾನು ಎಂದೂ ಅಮ್ಮನನ್ನು ಬಿಟ್ಟು ಇರುತ್ತಿರಲಿಲ್ಲ. ಎಲ್ಲಿ ಯಾಮಾರಿಸಿ ಎಲ್ಲಗಾದರೂ ಹೋಗಬಹುದು ಎಂದು ಸೀರೆಯ ಸೆರಗನ್ನೇ ಹಿಡಿದು ಕೊಂಡು ಜೊತೆಯಲ್ಲೇ ಇರುತ್ತಿದ್ದೆನು. ಹಾಗಾಗಿ ಅಂದು ಕೆರೆಯ ದಡದಲ್ಲಿ ಆಟವಾಡುವಾಗ  ಕೆರೆಯ ಸಣ್ಣ ಗುಂಡಿಗೆ ಕಲ್ಲು ಹಾಕಲು ಹೋಗಿ ನಾನೆ ಕಾಲು ಜಾರಿ ಆ ಗುಂಡಿಗೆ ಬಿದ್ದೆ, ಕೆರೆ ತುಂಬಾ ತುಂಬಿತ್ತು. ಆದರೆ ಅದು ಸಣ್ಣ ಗುಂಡಿಯಾಗಿದ್ದರಿಂದ ಅಲ್ಲೇ ಇದ್ದ ನನ್ನ ಚಿಕ್ಕಪ್ಪ ಮೇಲೆಕ್ಕೆ ಎತ್ತಿದ್ದರು, ಅಂದಿಗೆ ಅವತ್ತು ನಡೆಯಬಹುದಾದ ಒಂದು ದುರ್ಘಟನೆ ತಪ್ಪಿತ್ತು. ಸಾವನ್ನು ಗೆದ್ದು ಬಂದದ್ದು ನನಗೆ ಅರಿವಾಗಲೇ ಇಲ್ಲ ಏಕೆಂದರೆ ಹುಡುಗಾಟದ ತೀಟೆಯ ಹುಡುಗನಾಗಿದ್ದೆ, ಅಲ್ಲಿಂದ ಸುಮಾರು 4 ವರ್ಷವಿರಬಹುದು ನನಗೆ ಒಂದನೇ ತರಗತಿಗೆ ಶಾಲೆಗೆ ಸೇರುವ ಹೊತ್ತು, ನೀವು ಕೇಳಬಹುದು ಕನಿಷ್ಟ 5-6 ವರ್ಷವಾಗಬೇಕು ಶಾಲೆಗೆ ಸೇರಲು ಅಂತ ಆದರೆ ಅಂದು ನಮ್ಮ ಕಾಟವನ್ನು ತಪ್ಪಿಸಿಕೊಳ್ಳಲು ಶಾಲೆಗೆ ಸೇರಿಸುತ್ತಿದ್ದರು, ಅಂದು ಯಾವುದೇ ಜನ್ಮ ದಿನಾಂಕವನ್ನು ಕೂಡ ಇಟ್ಟು ಕೊಳ್ಳುತ್ತಿರಲಿಲ್ಲ. ಬರಿ ಹಬ್ಬದಿಂದ ಹಬ್ಬದ ಲೆಕ್ಕದಂತೆ ಸುಮಾರು ವರ್ಷ ಎಂದು ಅಂದಾಜಿಸುತ್ತಿದ್ದರು. ಅದರಂತೆ ಶಾಲೆಗೆ ಸೇರಲು ನನಗೆ ಒತ್ತಾಯಿಸಿದರು ಆದರೆ ನಾನು ಒಪ್ಪಲೇ ಇಲ್ಲ. ಬಲವಂತವಾಗಿ ಅಣ್ಣನ ಜೊತೆ ಶಾಲೆಗೆ ಕಾಲ್ಲಿಟ್ಟಿದ್ದೂ ಆಯ್ತು. ಶಾಲೆಗೆ ಹೋಗಲು ಇಷ್ಷವಿಲ್ಲದೇ ವಾರದಲ್ಲಿ 2 ದಿನ ಶಾಲೆಗೆ ಹೋಗದೇ ಕದ್ದು ಮುಚ್ಚಿ ಅಮ್ಮನ ಜೊತೆ ಇರುತ್ತಿದ್ದೆ, ಅಮ್ಮ ಅವತ್ತಿಗೆ ಕೂಲಿ ನಾಲಿ ಮಾಡಲು ಬೇರೆಯವರ ಹೊಲ ಗದ್ದೆಯಲ್ಲಿ ಎಲ್ಲಾ ತರಹದ ಕೆಲಸ ಮಾಡುತ್ತಿದ್ದರು ನಾನು ಜೊತೆಯಲ್ಲಿ ಹೋಗುತ್ತಿದ್ದಿರಿಂದ ನನಗೆ ಕೂರಲು ಬಿಸಿಲಿದ್ದರೂ ತಲೆಗೆ ಕಟ್ಟುತ್ತಿದ್ದ ಬಟ್ಟೆಯನ್ನೇ ನನಗೆ ಕೂರಲು ಕೊಡುತ್ತಿದ್ದರು.. ಹಾಗು ಮಧ್ಯಾಹ್ನದ ವೇಳೆಗೆ ಟೀ ಬ್ರೆಡ್ ನ್ನು ಕೊಡುತ್ತಿದ್ದರು, ಆಗ ತನಗೆ ಕೊಟ್ಟ ಬ್ರೆಡ್ ಸಹ ನನಗೆ ತಿನ್ನಲು ಕೊಡುತ್ತಿದ್ದರು ಅದಕ್ಕೂ ಕಾರಣವಿದೆ ಈಗಲೂ ನಮ್ಮ ಹಳ್ಳಿ ಜನ ಮದ್ಯಾಹ್ನ ದ ಹೊತ್ತಿನಲ್ಲಿ ಊಟಮಾಡುವುದಿಲ್ಲ ಒಟ್ಟಿಗೆ ಸಂಜೆ ಊಟಮಾಡುವರು ಅವತ್ತಿಗೆ ಅಂದಿಗೆ ನನಗೆ ಊಟವಿಲ್ಲದಿರುವುದರಿಂದ ಮಗ ಒಟ್ಟೆ ಹಸಿವಿನಿಂದ ಬಳಲು ಬಾರೆದೆಂದು ತನಗೆ ಕೊಟ್ಟಿದ್ದ ಬ್ರೆಡ್‍ನ್ನು ಕೊಡುತ್ತಿದ್ದರು. ಅದನ್ನು ನೋಡಿದ ಹೊಲದ ಮಾಲೀಕರು ಇನ್ನೊಂದು ಬ್ರೆಡ್‍ನ್ನು ಕೊಡುತ್ತಿದ್ದರೂ ಅವರನ್ನು ನೋಯಿಸಬಾರದೆಂದು ಸಲ್ಪ ತಿಂದು ಮತ್ತೆ ನನಗೆ ಅದನ್ನೂ ಕೊಡುತ್ತಿದ್ದರೂ. ಹೀಗೆ ಮಗ ಬಿಸಿಲಿನಲ್ಲಿ ನನ್ನ ಜೊತೆ ಬಾರದೆಂದು ಮುಂಚಿತವಾಗಿ ಶಾಲೆಗೆ ಸೇರಿಸುತ್ತಿದ್ದರೂ. ಹೀಗೆ ಶಾಲೆಗೆ ಚಕ್ಕರ್ ಹಾಕುತ್ತಿದ್ದನ್ನು ಮಾಸ್ಟರ್ ಗಮನಿಸಿ. ಒಂದು ದಿನ ಶಾಲೆ ತೆರೆಯುವ ಮುನ್ನ ಅಮ್ಮ ಆಚೆಗೆ ಕೆಲಸಕ್ಕೆ ಹೋಗುವ ಮುನ್ನ ನನ್ನನ್ನು ಶಾಲೆಗೆ ಕರೆದು ಕೊಂಡು ಹೋಗಲು ಕೈಯಲ್ಲಿ ಕೋಲನ್ನು ಹಿಡಿದು ಸೈಕಲ್ಲಿನಲ್ಲಿ ನಮ್ಮ ಮನೆಯ ಹತ್ತಿರ ಬರುತ್ತಿದ್ದಂತೆ ನಾನೂ ತಪ್ಪಿಸಿಕೊಂಡು ಓಡುತ್ತಿದ್ದೆ. ನನ್ನನ್ನು ಹಿಡಿಯಲು ಸ್ವತಃ ನನ್ನ ಅಣ್ಣಂದಿರೇ ಬರುತ್ತಿದ್ದರು ಅವರಿಗೆಲ್ಲಾ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿದ್ದೆ. ಎಷ್ಟೂ ದಿನ ಅಂತ ಹೀಗೆ ಮಾಡಲು ಸಾದ್ಯ ನೀವೇ ಹೇಳಿ. ನಂತರ ಶಾಲೆಗೆ ಹೋಗುವುದನ್ನು ರೂಢಿಸಿಕೊಂಡೆ. ಈ ತಾಯಿಯ ಪ್ರೀತಿಯನ್ನು ಸಹಿಸಲಾರದ ಆ ದೇವರು ಒಂದು ದಿನ ಅಂದು ಶ್ರಾವಣದ 3ನೇ ಶನಿವಾರ ಅಂದು ಶಾಲೆಯು ಒಪ್ಪತ್ತಿಗೆ ಬಿಡುತ್ತಿದ್ದರಿಂದ ಅಣ್ಣನ ಜೊತೆ ದನ ಮೇಯಿಸಲು ಹೊಲದ ಕಡೆಗೆ ಹೊರಟ್ಟಿದ್ದೆ. ಅಲ್ಲಿ ಅಣ್ಣ ಕಾರೆ ಗಿಡದಿಂದ ಬುಗುರಿಯನ್ನು ಮಾಡತ್ತಿದ್ದ. ಬುಗುರಿಯನ್ನು ಮಾರಿ ಬಂದ ಹಣದಿಂದ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ತಿಂಡಿ ತಿನಿಸು, ಆಟದ ವಸ್ತು ತೆಗೆದುಕೊಳ್ಳುಲು ನಾನಾ ರೀತಿಯಲ್ಲಿ ಚಟುವಟಿಕೆ ಇಂದ  ಇರತ್ತಿದ್ದೆವು (  ಬೆಳಗ್ಗೆ ಎದ್ದು ಬೇವಿನಬೀಜ, ಹೊಂಗೆಯಬೀಜ, ಹುಣಸೆಬೇಜಗಳನ್ನು ಕೃಢೀಕರಿಸಿ ಮಾರುತ್ತಿದ್ದೆವು), ಹಾ ಹೇಳಿದಂತೆ ಅಂದು ಶ್ರಾವಣ ಶನಿವಾರ ಮನೆಯಲ್ಲಿ ಹಬ್ಬದ ಸಡಗರ ಹಾಗಾಗಿ ಅಕ್ಕನ್ನನ್ನೂ ಪೂಜೆಗೆ ದೇವಸ್ಥಾನಕ್ಕೂ ಕಳಿಸಿದ್ದರು. ನಾನು ಅಣ್ಣನ ಬಳಿಯಿಂದ ಮತ್ತೆ ಮನೆಗೆ ವಾಪ್ಪಸ್ಸಾದೆ ಅಮ್ಮ ಹಬ್ಬಕ್ಕೆ ಸಾವಿಗೆ ಮಾಡಲು ಅಕ್ಕಿ ಹಿಟ್ಟು, ಗೋದಿ ಹಿಟ್ಟುನ್ನು ಪುಡಿಮಾಡಿಸಲು ಪಟ್ಟಣಕ್ಕೆ ಹೊರಟೆವು. ದಾರಿ ಮದ್ಯ ಒಂದು ಕಬ್ಬಿಣದ ಸಲಾಕೆ ಇಂದ ತುಂಬಿದ್ದ ಲಾರಿ ಕೆಟ್ಟು ನಿಂತಿತ್ತು. ನಾವು ನಮ್ಮ ಊರಿನ ಇತರರೊಂದಿಗೆ (ಚಿಕ್ಕಪ್ಪ ನೊಂದಿಗೆ) ರಸ್ತೆಯ ಮಾರ್ಗದಲ್ಲಿ ಒಂದು ನೀರು ಹಾದು ಹೋಗವ ಇಕ್ಕಟ್ಟಾದ ಬ್ರಿಡ್ಜ ನ ಬಳಿಹೋಗುತ್ತಿದ್ದಾಗ. ಮೊದಲು ಚಿಕ್ಕಪ್ಪ, ನಂತರ ಅಮ್ಮ, ನಂತರ ನಾನು ನಂತರ ಇನ್ನೊಬ್ಬ ಚಿಕ್ಕಪ್ಪ ಹೀಗೆ ಎಲ್ಲಾ ಜೊತೆಗೆ ಹೋಗುತ್ತಿದ್ದಾಗ ಒಂದು ಭಯಂಕರ ಶಬ್ದ ಉಂಟಾಯಿತು ಏನಾಯಿತು ಎಂದು ನೋಡುವಷ್ಷರಲ್ಲಿ ನಮ್ಮ ಚಿಕ್ಕಪ್ಪ ಬ್ರಿಡ್ಜನಿಂದ ಆಚೆ ಬಿದ್ದಿದ್ದರು, ನಮ್ಮ ತಾಯಿ ಲಾರಿಯ ಕೆಳಗೆ ಬಿದ್ದಿದ್ದರು ನಾನು ಮೂರನೇಯವ ಸಣ್ಣವನಾಗಿದ್ದರಿಂದ ಬ್ರಿಡ್ಜ್ ನ ಇಕ್ಕಲೆದಲ್ಲಿ ಅವಿತು ಕೊಂಡಿದ್ದೆ. ಹಾಗಾಗಿ ನನಗೇನು ಆಗಲ್ಲಿಲ್ಲ. ಆದರೆ ಚಿಕ್ಕಪ್ಪ ಅಲ್ಲೇ ಕೊನೆಯುಸಿರೆದರು. ಅಮ್ಮನ ಎರಡೂ ಕಾಲುಗಳ ಮೇಲೆ ಕೆಟ್ಟು ಹೋಗಿದ್ದ ಅದೇ ಲಾರಿ ಹರಿದು ಮುಂದೆ ನಿಲ್ಲಿಸಿದ್ದ. ಚಿಕ್ಕಪ್ಪ ಕಾಲು ಒಂದು ಸಂಪೂರ್ಣ ಮುರಿದು ಅದು ಇನ್ನು ಚಪ್ಪಲಿಯೊಂದಿಗೆ ರಕ್ತದ ಹರಿವಿನಿಂದ ಕುಣಿಯುತ್ತಿದ್ದ ದೃಶ್ಯ ಇಂದಿಗೂ ಮರೆಯುವಂತಿಲ್ಲ ತದ ನಂತರ ಅಮ್ಮನನ್ನು ಉಳಿದವರು ಉಪಚರಿಸುತ್ತಿದ್ದರು. ಅವರು ಹೇಳಿದಂತೆ ಅತ್ತುಕೊಂಡು ಅಪ್ಪನ್ನು ಕರೆದು ಕೊಂಡು ಬರಲು ಪಟ್ಟಣಕ್ಕೆ ಕಾಲಿಟ್ಟೆ ಅದಾದ ಮೇಲೆ ಅಮ್ಮನನ್ನು ನೋಡುಲು ಸಾದ್ಯವಾಗಿರಲಿಲ್ಲ ಇತ್ತ ಚಿಕ್ಕಪ್ಪನ ಸಾವಿನ ಸುದ್ದಿ ಕೇಳಿ ತಡೆಯಾರದ ದುಃಕ ಯಾರೋ ಎನೇ ಎಷ್ಟೇ ಸಮಾದಾನ ಮಾಡಿದರೂ ಕೇಳದ ಪರಿಸ್ಥಿತಿ. ಅಮ್ಮನನ್ನು ನೋಡಲೇ ಬೇಕೆಂದು ಎಷ್ಟೇ ಹಠ ಹಿಡಿದರೂ ಅಮ್ಮನ ಬಳಿ ಯಾರು ಕರೆದು ಕೊಂಡು ಹೋಗುವ ಮನಸ್ಸು ಮಾಡಲಿಲ್ಲ. ಅದಕ್ಕೂ ಒಂದು ಕಾರಣವಿದೆ ಎಲ್ಲಿ ತಾಯಿ ತನ್ನ ಮಗನನ್ನು ನೋಡಿ ತೊಂದರೆ ಉಂಟಾಗುವುದೋ. ಎಂದು ಕರೆದು ಕೊಂಡು ಹೋಗಿರಲಿಲ್ಲ. ಒಂದು ದಿನ ಅಮ್ಮನ ಮುಖ ನೋಡುವ ಬಾಗ್ಯ ಒದಗಿ ಬಂದಿತು. ನಾನು ಬೇಗ ಎದ್ದು ರೆಡಿಯಾಗಿ ತಾಯಿಯನ್ನು ನೋಡಲು ಬೆಂಗಳೂರಿಗೆ ಬಂದೆವು ಅದು ವಿಕ್ಟೋರಿಯಾ ಆಸ್ಪತ್ರೆ. ನನಗೆ ಆ ಬೆಂಗಳೂರು ಅಂದರೆ ಭಯ ಅಲ್ಲಿ ಎತ್ತರಕ್ಕೆ ಕಟ್ಟಿರುವ ಕಟ್ಟಡಗಳು. ಜನಜಂಗುಳಿ ಎಲ್ಲಿ ಕಳೆದು ಹೋಗುವೆನೆಂದು ಭಯ ಕಾಡುತ್ತಿತ್ತು ಹಾಗಾಗಿ ಅಪ್ಪನ ಕೈ ಬಿಟ್ಟು ಹೋಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಮಲಗಿದ್ದ ಅಮ್ಮನನ್ನು ನೋಡಿ ಕಣ್ಣಲ್ಲಿ ನೀರು ತುಂಬಿತು. ಅತ್ತ ಅಮ್ಮ ತಮ್ಮ ಕಿರಿಮಗನನ್ನು ನೋಡಿ ಸ್ವರ್ಗವೇ ಸಿಕ್ಕಂತೆ ಖುಷಿಯಿಂದ ಸಾಕಷ್ಟು ಅತ್ತರು. ಅಲ್ಲೂ ಸಹ ಮಾತನಾಡುವ ಪರಿಸ್ಥಿತಿಯಲ್ಲಿ ಇರದ ಅಮ್ಮ ಅವತ್ತೂ ಕೂಡ ಊಟಮಾಡಿ ಕೊಂಡು ಬಂದೆಯಾ ಎಂದು ಉಪಚರಿಸಿದರು ನಾನು ಇಲ್ಲಾ ಎಂದಾಗ ನೆಂಟರು ಕೊಟ್ಟಿ ಹೋಗಿದ್ದ ಪಕ್ಕದಲ್ಲೇ ಇದ್ದ ಮೂಸಂಬಿ ಹಾಗು ಸೇಬು ಹಣ್ನನ್ನು ಕೊಟ್ಟರು. ನನಗೆ ಅವತ್ತಿಗೆ ಸುಮಾರು ವಯಸ್ಸು ನನಗೆ 5-6 ವರ್ಷವಿರಬಹುದು. ಹಾಗಾಗಿ ನನಗೆ ಬೇಡ ಎನ್ನುವ ಮಾತಿಲ್ಲ ಹಾಗಾಗಿ ತಿಂದೆ. ನಾವು ಸಹ ಹೋಗುವಾಗ ಬ್ರೆಡ್ ಹಣ್ಣುಗಳನ್ನು ನಮ್ಮ ತಂದೆ ತೆಗೆದು ಕೊಂಡು ಹೋಗಿದ್ದೆವು. ಅಲ್ಲಿ ಅಮ್ಮನ ಪರಿಸ್ಥಿತಿ ಉತ್ತಮವಾಗಿರಲಿಲ್ಲ ಅದು ನನಗೆ ಗೊತ್ತಾಗಲೂ ಇಲ್ಲ. ಕಡೆಗೂ ಮನೆಗೆ ಬಂದ್ವಿ. ಮಾರನೇ ದಿನ ಮುಂಜಾನೆಯ ಹೊತ್ತು ಮನೆಯ ಅಂಗಳದಲ್ಲಿ ಗುಸು ಗುಸು ಪಿಸುಮಾತುಗಳು ಕೇಳಿ ಬಂದವು. ಏನು ಎತ್ತ ವಿಷಯ ನನಗೆ ಗೊತ್ತಾಗಲಿಲ್ಲ. ಮನೆ ಒಳಗೆ ಒಬ್ಬರು ಬಂದು ಅಗಿಯುವ ಆರೆಯನ್ನು ಕೇಳಿದಾಗ ತಂದು ಕೊಟ್ಟೆನು. ಆಗ ತಾಯಿಯು ಸಾವಿನ ವಿಷಯ ಗೊತ್ತಾಯಿತು ಆದರೆ ಸಾವು ಏನೆಂದು ಗೊತ್ತಾಗದ ನನಗೆ ಎಲ್ಲಿಂದ ಬರಬೇಕು ಹೇಳಿ ದುಃಖ ಹಾಗಾಗಿ ನಾನೇನು ಅಳಲಿಲ್ಲ. ಆದರೆ ಮನೆಯಲ್ಲಿ ಇದ್ದ ಅಕ್ಕ. ಅಣ್ಣಂದಿರೂ ನೆರೆಯವರೆಲ್ಲಾ ಅಳುತ್ತಿದ್ದರಿಂದ ನಾನು ಸುಮ್ಮನೆ ಆಗೊಮ್ಮೆ ಈಗೊಮ್ಮೆ ಅವರನ್ನು ನೋಡಿ ಅಳುತ್ತಿದ್ದೆ. ಆಚೆ ಸತ್ತವನ್ನು ಊರಿಗೆ ತರುವಂತಿಲ್ಲ ಹಾಗಾಗಿ ಊರಾಚೆ ಅಮ್ಮನನ್ನು ತರುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ನಾವೆಲ್ಲರೂ ಹೋದೆವು. ಕಡೆಗೂ ವಾಹನದಲ್ಲಿ ಬಿಳಿ ಪಂಚೆಯನ್ನು ಸುತ್ತಿಕೊಂಡು ಇಳಿಸಲಾಯಿತು ಎಲ್ಲರೂ ಜೋರಾಗಿ ಅಳಲು ಪ್ರಾರಂಭಿಸಿದರು. ಆದರೇ ನನಗೆ ಅಳು ಬರಲೇ ಇಲ್ಲಾ ಇವರೆಲ್ಲಾ ಯಾಕೆ ಅಳುತ್ತಿದ್ದಾರೆಂದು ಅರ್ಥವಾಗಲೇ ಇಲ್ಲ ಕಡೆಗೆ ಸಾಂಪ್ರದಾಯಕವಾಗಿ ಮಾಡುವ ಎಲ್ಲಾ ಕ್ರಿಯೆಯನ್ನು ನಡೆಸುತ್ತಿದ್ದರು. ನಾನು ಅಮ್ಮ ಬಳಿ ಹೋದಾಗ ಅವರು ನಿದ್ದೆಯಿಂದ ಮಲಗಿದ್ದರು ಆದರೂ ಅವರೇ ನಮ್ಮಮ್ಮ ಎಂದು ಗುರುತು ಹಚ್ಚುವುದು ಅಷ್ಟೊಂದು ಸಾದ್ಯವಾಗಲಿಲ್ಲ ಏಕೆಂದರೆ ಅವರ ತಲೆಬುರುಡೆ, ಮೈಯೆಲ್ಲಾ ಬಿಳಿಬಟ್ಟೆಯಿಂದ ಹೊದಿಸಲಾಗಿತ್ತು. ಯಾರೇ ಎಷ್ಟೇ ಹೇಳಿದರೂ ನನಗೆ ಅಳು ಬರಲೇ ಇಲ್ಲ. ಆದರೆ ಯಾವಾಗ ಅವರನ್ನು ಗುಂಡಿಯಲ್ಲಿ ಹಾಕುತ್ತಿದ್ದರೋ ಅವಾಗ ನನಗೆ ಒಬ್ಬರು ನಿಮ್ಮನ್ನನ್ನು ಕೊನೆಯಬಾರಿ ನೋಡಿಕೋ ಮತ್ತೆ ಅವರನ್ನು ಗುಂಡಿಗೆ ಹಾಕುತ್ತಾರೆ ಎಂದಾಗ ನಾನು ಜೋರಾಗಿ ಚೀರಾಟದಿಂದ ಗುಂಡಿಗೆ ಹಾಕಬೇಡಿ ಅಮ್ಮಾ………… ಎಂದು ಗೋಗರೆದೆ… ಆಗಲೂ ಸಹ ನನಗೆ ದ್ವಂದ ಆಲೋಚನೆ. ಇವರೂ ನಿಜಕ್ಕೂ ನನ್ನಮ್ಮಾ ನ ಅಂತ.  ಆದರೂ ಸಹ ಇಂದಿಗೂ ಎಲ್ಲೋ ನಮ್ಮಮ್ಮಾ ಇದ್ದಾರೆ ಯಾವತ್ತಾದರೂ ಊರು ಸಿಕ್ಕಿ ವಾಪಸ್ಸು ಬರುತ್ತಾಳೆ ಎಂದು ಒಂದೊಂದು ಸಲ ಆಲೋಚಿಸುವೆನು. ಆದರೆ ಸತ್ಯವೂ ಸಹ ಈಗಾಗಲೇ ಗೊತ್ತಾಗಿದೆ. ಅಮ್ಮನನ್ನು ಕಳೆದು ಕೊಂಡು ಸುಮಾರು 25 ವರ್ಷವಾಗಿರಬಹುದು ಅವರ ನೆನಪಾಗಿ ನನ್ನ ಬಳಿ ಒಂದು ಪೋಟೋ ಸಹ ಇಲ್ಲ. ತುಸು ಅಮ್ಮ ಪ್ರೀತಿಯನ್ನು ಕಂಡ ನನಗೆ ಅಮ್ಮನನ್ನು ನೆನೆದು ಹಲವು ಮನಸೋ ಇಚ್ಚೆ ಅತ್ತಿರುವೆನು. ಇಂತ ಅಮ್ಮಂದಿರ ಪ್ರೀತಿಯನ್ನು ಪಡೆದ ನೀವೆ ನಿಜವಾಗಿಯು ಪುಣ್ಯವಂತರು. ಅಮ್ಮನ ಪ್ರೀತಿಯನ್ನು ಅರಿಯುವ ಮುನ್ನವೇ ಅಮ್ಮನನ್ನು ಕಳೆದು ಕೊಂಡೆ ಅಮ್ಮನ ಪ್ರೀತಿಯನ್ನು ಕಾಣದೇ  ಹೇಳಲು ಇಚ್ಚಿಸದ ಪರಿಸ್ಥಿತಿಯಿಂದ ಬೆಳೆದಿರುವೆನು. ಅಂದಿನ ತುಸು ಪ್ರೀತಿಯನ್ನು ಇಂದು ನೆನೆದು ಅದರ ಬೆಲೆಯನ್ನು ಅರಿತೆ. ಸಾಕಷ್ಟು ಸಲ ಅಮ್ಮಾ ನನ್ನನ್ನು ನಿನ್ನ ಬಳಿ ಕರೆದು ಕೊಂಡು ಹೋಗು ನಾನು ನಿನ್ನ ನೋಡುವ ಆಸೆಯಾಗಿದೆ ಎಂದುಕೊಂಡೇ ಬೆಳೆದೆ. ಮತ್ತಷ್ಟೂ ಬರೆಯಲು ನನ್ನಿಂದ ಸಾದ್ಯವಿಲ್ಲ... …...